ನಾನ್ ಚಾಂಗ್ -
 	ಮಧ್ಯ ಪೂರ್ವ ಚೀನದಲ್ಲಿರುವ ಜೀಯಾಂಗ್ಸೀ ಪ್ರಾಂತ್ಯದ ಆಡಳಿತ ಕೇಂದ್ರ. ಕಾನ್ ಚಿಯಾಂಗ್ ನದಿಯ ಬಲದಂಡೆಯ ಮೇಲೆ ಹಾಗೂ ಪೋ-ಯಾಂಗ್ ಸರೋವರದ ಬಳಿ. ವೂ-ಹಾನ್‍ಗೆ 256 ಕಿ.ಮೀ. ದೂರದಲ್ಲಿ ಉ.ಅ. 28( 41 ಮತ್ತು ಪೂ.ರೇ. 115( 53 ಮೇಲೆ ಇದೆ. ಜನಸಂಖ್ಯೆ ಸುಮಾರು 5,20,000. ಈ ನಗರ ಕ್ರಿ.ಪೂ. 201ರಲ್ಲಿ ಸ್ಥಾಪಿತವಾಯಿತು. ಆಗ ಇದರ ಸುತ್ತ ಮಣ್ಣಿನ ಗೋಡೆ ನಿರ್ಮಿಸಲಾಯಿತು. ಕ್ರಿ.ಶ. 763ರ ತರುವಾಯ ಇದು ಜೀಯಾಂಗ್ಸೀ ಪ್ರಾಂತ್ಯದ ಕೇಂದ್ರವಾಯಿತು. 959ರಲ್ಲಿ ದಕ್ಷಿಣದ ಟಾಂಗ್ ಸಂತತಿಯ ಅರಸರ ಕಾಲದಲ್ಲಿ ಇದು ದಕ್ಷಿಣದ ರಾಜಧಾನಿಯಾಯಿತು. 981ರಲ್ಲಿ ಇದು ಸೂಂಗ್ ಸಂತತಿಯ ರಾಜರಿಗಾ ವಶವಾದಾಗ ನಗರದ ಹೆಸರು ಹಂಗ್ ಚೌ ಎಂದಾಯಿತು. 1164ರಿಂದ 1368ರ ವರೆಗೆ ಇದಕ್ಕೆ ಇದ್ದ ಹೆಸರು ಲಂಗ್-ಸಿóಂಗ್. ಯೂವಾನ್ (ಮುಂಗೋಲ್) ಅರಸರ ಆಳ್ವಿಕೆಯ (1279-1368) ಕೊನೆಯ ದಿನಗಳಲ್ಲಿ ಮಿಂಗ್ ಸಂತತಿಯ (1308-1614) ಸ್ಥಾಪಕ ಚೂ ಯೂವಾನ್-ಚಾಂಗನಿಗೂ ಸ್ಥಳೀಯ ಪಾಳೆಯಗಾರ ಚೆನ್ ಯೂ-ಲಿಯಾಂಗನಿಗೂ ಇಲ್ಲಿ ಕದನ ನಡೆಯಿತು. 16ನೆಯ ಶತಮಾನದಲ್ಲಿ ಇದು ಮಿಂಗ್ ಸಂತತಿಯ ವಿರುದ್ಧದ ಬಂಡಾಯದ ಕೇಂದ್ರವಾಗಿತ್ತು. ಟೈಪಿಂಗ್ ದಂಗೆಯಿಂದ (1850-64) ಈ ನಗರಕ್ಕೂ ನಷ್ಟವಾಯಿತು. 19ನೆಯ ಶತಮಾನದ ಉತ್ತರಾರ್ಧಧಲ್ಲಿ ಕರಾವಳಿಯಲ್ಲಿ ಉಗಿಹಡಗುಗಳು ಸಂಚರಿಸಲಾರಂಭಿಸಿದಾಗ ಒಳನಾಡಿನ ಮಾರ್ಗಗಳ ಪ್ರಾಮುಖ್ಯ ತಗ್ಗಿದ ಫಲವಾಗಿ ನಾನ್-ಚಾಂಗ್‍ನ ಪ್ರಾಮುಖ್ಯ ತಗ್ಗಿತು. ಚಿಯೂ ಚಿಯಾಂಗ್ ನಗರ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೂ ಜೀಯಾಂಗ್ಸೀ ಪ್ರಾಂತ್ಯದ ಮಹಾನಗರವಾಗಿ ನಾನ್-ಚಾಂಗ್ ಬೆಳೆದಿದೆ. 1915ರಲ್ಲಿ ನಾನ್-ಚಾಂಗ್‍ಗೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇದು ಜಪಾನಿನ ಆಕ್ರಮಣಕ್ಕೆ ಒಳಗಾಗಿತ್ತು. ಯುದ್ಧಾನಂತರ ಇದು ಕೈಗಾರಿಕಾ ನಗರವಾಗಿ ಬೆಳೆದಿದೆ. ಇಲ್ಲಿ ಹತ್ತಿ ಬಟ್ಟೆ ಮತ್ತು ನೂಲು, ಕಾಗದ, ಪಿಂಗಾಣಿ, ರಸಗೊಬ್ಬರ, ಕ್ರಿಮಿನಾಶಕ, ಔಷಧ, ರಾಸಾಯನಿಕ, ಮೋಟಾರು ಮತ್ತು ಟ್ರ್ಯಾಕ್ಟರ್ ಕೈಗಾರಿಕೆಗಳಿವೆ. ನಗರದ ಪ್ರಧಾನ ವ್ಯಾಪಾರ ಸರಕುಗಳು ಬತ್ತ, ಹತ್ತಿ, ಚಹ, ಸೆಣಬು ಮತ್ತು ತಂಬಾಕು.       		
				 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ